kalash
Adhyātmaprakāsha Kāryālaya
एतज्ज्ञेयं नित्यमेवात्मसंस्थम् | नातः परं वेदितव्यं हि किञ्चित् ||
ಶ್ರೀ ಸಚ್ಚಿದಾನಂದ ಅಧ್ಯಾತ್ಮವಿದ್ಯಾಲಯ ಪರಿಚಯ ಪತ್ರ ಮತ್ತು ಪಾಠಕ್ರಮ

ಪ್ರಕಟಣೆ
ಪ್ರಿಯ ಅಧ್ಯಾತ್ಮ ಪ್ರೇಮಿಗಳೇ,

ಅಧ್ಯಾತ್ಮಪ್ರಕಾಶ ಕಾರ್ಯಾಲಯವು ಅಧ್ಯಾತ್ಮ ವಿದ್ಯೆಯಲ್ಲಿ ಜನರಿಗೆ ಹೆಚ್ಚು ಆದರವನ್ನುಂಟು ಮಾಡಬೇಕೆಂಬ ಉದ್ದೇಶದಿಂದ ೧೯೨೦ನೆಯ ಇಸವಿಯಿಂದಲೂ ದುಡಿಯುತ್ತಿದೆಯೆಂಬುದನ್ನೂ ಕನ್ನಡ, ಸಂಸ್ಕೃತ, ಇಂಗ್ಲೀಷು ಭಾಷೆಗಳಲ್ಲಿ ಬರೆದಿರುವ ಅಧ್ಯಾತ್ಮಗ್ರಂಥಗಳನ್ನು ಪ್ರಕಟಿಸುವುದು. “ಅಧ್ಯಾತ್ಮಪ್ರಕಾಶ” ವೆಂಬ ಮಾಸಪತ್ರಿಕೆಯನ್ನು ಹೊರಡಿಸುವುದು; ಗ್ರಂಥಕಾಲಕ್ಷೇಪಗಳನ್ನು ಏರ್ಪಡಿಸುವದು; ಅಧ್ಯಾತ್ಮ ಸಂಬಂಧವಾದ ಉತ್ಸವಗಳನ್ನೂ ಉಪನ್ಯಾಸಗಳನ್ನೂ ಏರ್ಪಡಿಸುವುದು- ಈ ಬಗೆಯ ಸಾಧನಗಳಿಂದ ಅಧ್ಯಾತ್ಮವಿದ್ಯಾಪ್ರಸಾರವನ್ನು ಮಾಡುತ್ತಿದೆಯೆಂಬುದನ್ನೂ ಈಗ ಕನ್ನಡನಾಡಿನಲ್ಲಿಯೂ ಮತ್ತು ಇತರ ಪ್ರಾಂತಗಳಲ್ಲಿಯೂ ಅನೇಕರು ಬಲ್ಲವರಾಗಿದ್ದಾರೆ. ಅಧ್ಯಾತ್ಮಪ್ರಕಾಶ ಕಾರ್ಯಾಲಯದ ಅಂಗವಾಗಿರುವ ವಿದ್ಯಾಲಯದಲ್ಲಿ ಅಧ್ಯಾತ್ಮ ವಿದ್ಯಾ ಪ್ರಚಾರಕರನ್ನು ಸಜ್ಜುಗೊಳಿಸಲು ಮತತ್ರಯಗಳಿಗೊಪ್ಪಾಗುವ ಒಂದು ಅಭ್ಯಾಸ ಪದ್ಥತಿಯನ್ನೂ ಏರ್ಪಡಿಸಿರುತ್ತದೆ. ಶ್ರೀ ಶ್ರೀ ಪ್ರಕಾಶಾನಂದೇಂದ್ರಸರಸ್ವತೀಸ್ವಾಮಿಗಳ ನೇತೃತ್ವದಲ್ಲಿ ಈ ಅಭ್ಯಾಸ ಪದ್ಥತಿಯಲ್ಲಿ ಈ ವರ್ಷವೂ ಕೂಡ ಸಂಸ್ಕತ, ಇಂಗ್ಲೀಷು, ಕನ್ನಡ- ಈ ಮೂರು ಭಾಷೆಗಳಲ್ಲಿರುವ ಗ್ರಂಥಗಳ ಮೂಲಕ ತತ್ತ್ವವಿಚಾರವನ್ನೂ ಸಾಧನಕ್ರಮವನ್ನೂ ತಿಳಿಸಿಕೊಡಲಾಗುವುದು. ವಿದ್ಯಾಲಯದ ವ್ಯಾಪ್ತಿಯು ಇಡಿ ಭಾರತ ದೇಶಕ್ಕೆ ಇರುವುದು. ಆದ್ದರಿಂದ ಬೋಧನಕ್ರಮದಲ್ಲಿ ಉಪಯೋಗಿಸುವ ಪ್ರಧಾನಭಾಷೆಗಳು ಸಂಸ್ಕೃತ ಮತ್ತು ಇಂಗ್ಲೀಷ್ ಆಗಿರುವುದು.

ಅಭ್ಯಾಸದ ವಿಷಯಗಳು

  • ಉಪನಿಷತ್ತುಗಳು, ಭಗವದ್ಗೀತೆ, ಬ್ರಹ್ಮಸೂತ್ರ-ಎಂಬ ಪ್ರಸ್ಥಾನತ್ರಯವನ್ನು ದಕ್ಷಿಣದೇಶದಲ್ಲಿ ಪ್ರಚಾರದಲ್ಲಿರುವ ಮತತ್ರಯದ ಪರಿಚಯದೊಡನೆ ಹೇಳಿಕೊಡಲಾಗುತ್ತದೆ. ಇದರ ಜೊತೆಗೆ ಹಿಂದೂ ಮತದ ಇತಿಹಾಸವನ್ನೂ ಭರತಖಂಡದಲ್ಲಿರುವ ವೀರಶೈವ; ಆರ್ಯಸಮಾಜ; ಬ್ರಹ್ಮಸಮಾಜ-ಮುಂತಾದ ಪಂಥಗಳ ಸಂಕ್ಷಿಪ್ತ ಪರಿಚಯವನ್ನೂ ಸೇರಿಸಿರುತ್ತದೆ.
  • ಅವೈದಿಕಮತಗಳ- ಎಂದರೆ ಜೈನ, ಬೌದ್ಧ, ಕ್ರಿಸ್ತಿಯನ್, ಇಸ್ಲಾಂ, ಪಾರ್ಸಿ, ಯಹೋದಿ ಮುಂತಾದವುಗಳ- ಸ್ಥಾಪಕರ ಜೀವನಚರಿತ್ರೆಯನ್ನೂ ಮುಖ್ಯೋಪದೇಶಗಳನ್ನೂ ಇಂಗ್ಲೀಷಿನಲ್ಲಿ ಅಥವಾ ಭಾಷಾಂತರದಲ್ಲಿ ಪ್ರಕಟವಾಗಿರುವ ಪುಸ್ತಕಗಳ ಸಹಾಯದಿಂದ ತಿಳಿಸಿಕೊಡಲಾಗುತ್ತದೆ.
  • ಜಪ, ಪೂಜೆ, ಧ್ಯಾನ-ಮುಂತಾದ ಸಾಧನಗಳ ಮರ್ಮವನ್ನು ವೈದಿಕ ಪದ್ಧತಿಗನುಗುಣವಾಗಿ ತಿಳಿಸಿಕೊಡಲಾಗುತ್ತದೆ.
  • ಪುರಾಣಪ್ರವಚನ, ಕೀರ್ತನ, ಉಪನ್ಯಾಸ- ಮುಂತಾದ ರೀತಿಯಿಂದ ಅಧ್ಯಾತ್ಮಜೀವನವನ್ನು ನಡೆಯಿಸಿಕೊಂಡು ಸತ್ಕಾಲಕ್ಷೇಪ ಮಾಡುವ ರೀತಿಯನ್ನೂ ಅ ಮೂಲಕ ಜನತಾಸೇವೆಯನ್ನು ಮಾಡುವ ಕ್ರಮವನ್ನೂ ತಿಳಿಸಿಕೊಡಲಾಗುತ್ತದೆ.

ಅಭ್ಯಾಸದ ಕಾಲ, ಪಾಠಕ್ರಮದ ವಿವರ

ಮೊದಲನೆ ವರ್ಷ: ಈಶ, ಕೇನ, ಕಠ, ಮುಂಡಕ, ಪ್ರಶ್ನಭಾಷ್ಯಗಳು; ಭಗವದ್ಗೀತಾ ಭಾಷ್ಯದ ೬ ಅಧ್ಯಾಯಗಳು; ಹಿಂದೂಧರ್ಮದ ಇತಿಹಾಸ.
ಎರಡನೇ ವರ್ಷ: ಐತರೇಯ, ತೈತ್ತಿರೀಯ, ಮಾಂಡೂಕ್ಯ, ಭಗವದ್ಗೀತಾ ೧೨ನೆಯ ಅಧ್ಯಾಯ ಪೂರ; ತರ್ಕಸಂಗ್ರಹ-ದೀಪಿಕಾ ಸಹಿತ; ಸಾಂಖ್ಯಯೋಗಗಳ ಸಾಮಾನ್ಯ ಪರಿಚಯ; ಜೈನಬೌದ್ಧಮತಗಳ ಪರಿಚಯ
ಮೂರನೆಯ ವರ್ಷ: ಬೃಹದಾರಣ್ಯಕ ೩ ಅಧ್ಯಾಯಗಳು, ಭಗವದ್ಗೀತಾ ಪೂರ; ವೇದಾಂತಪರಿಭಾಷಾದಿ ಗ್ರಂಥಗಳ ಸಾಮಾನ್ಯಪರಿಚಯ; ಪಾರ್ಸಿ, ಯಹೋದಿ, ಕ್ರಿಸ್ತಿ ಇಸ್ಲಾಂ ಮತಗಳ ಪರಿಚಯ
ನಾಲ್ಕನೆಯ ವರ್ಷ: ಬೃಹದಾರಣ್ಯಕ ಪೂರ; ಛಾಂದೋಗ್ಯ; ಬ್ರಹ್ಮಸೂತ್ರ ಪ್ರಥಮಾಧ್ಯಾಯ; ವಾಖ್ಯಾನ ಪ್ರಸ್ಥಾನಗಳ ಸಾಮಾನ್ಯ ಪರಿಚಯ.
ಐದನೆಯ ವರ್ಷ: ಬ್ರಹ್ಮಸೂತ್ರ ಪೂರ; ವ್ಯಾಖ್ಯಾನಗ್ರಂಥಗಳ ಸಾಮಾನ್ಯಪರಿಚಯ, ಪಾಶ್ಚಾತ್ಯ ದರ್ಶನಗಳ ಇತಿಹಾಸ.

ಅಭ್ಯಾಸ ಕ್ರಮ

  • ಬೆಳಿಗ್ಗೆ, ಅಪರಾಹ್ನ:- ಎರಡು ಹೊತ್ತೂ ಸುಮಾರು ಒಂದೊಂದು ಘಂಟೆಯ ಎರಡು ಪಾಠಗಳು.
  • ಮಧ್ಯಾಹ್ನ:- ಪುರಾಣ, ಕೀರ್ತನೆ, ಉಪನ್ಯಾಸ- ಇವುಗಳಿಗೆ ಬೇಕಾದ ಸಾಮಗ್ರಿಯ ಸಂಗ್ರಹ.
  • ಸಾಯಂಕಾಲ:- ಜನಸಾಮಾನ್ಯಕ್ಕೆ ಅನುಕೂಲವಾಗುವ ಪುರಾಣ ಶ್ರವಣಾದಿಗಳನ್ನು ನಡೆಯಿಸುವದು.
  • ಬೆಳಿಗ್ಗೆ ಅಥವಾ ಅಪರಾಹ್ನ:- ಒಂದು ಘಂಟೆ ಕಾರ್ಯಾಲಯದಲ್ಲಿ ಬೇರೆ ಬೇರೆಯ ಕೆಲಸವನ್ನು ಕಲಿಯುವದು.
  • ಶ್ರೀ ಶ್ರೀ ಪ್ರಕಾಶನಂದೇಂದ್ರಸರಸ್ವತಿಸ್ವಾಮಿಗಳವರು ಮತ್ತು ಇತರ ಗೌರವಾನ್ವಿತ ವಿದ್ವಾಂಸರುಗಳು ಪಾಠಗಳನ್ನು ಅಭ್ಯಸಿಸುವರು.

ವಿದ್ಯಾರ್ಥಿಗಳಿಗಿರಬೇಕಾದ ಅರ್ಹತೆ

ಈಗಿನ ಜನಜೀವನಕ್ರಮವನ್ನರಿತುಕೊಂಡು ವೈದಿಕ, ಅವೈದಿಕ ಬ್ರಾಹ್ಮಣ, ಅಬ್ರಾಹ್ಮಣ-ಮುಂತಾದ ಭೇದಭಾವನೆಗಳನ್ನು ಮುರಿದು ತಮ್ಮ ಅನುಷ್ಠಾನದಿಂದ ಜನರಿಗೆ ಮೇಲುಙ್ಕ್ತೆಯಾಗಿ ಪರಸ್ಪರ ಸೌಹಾರ್ದವನ್ನೂ ಸಹಾನುಭೂತಿಯನ್ನೂ ಬೆಳೆಯಿಸಬಲ್ಲ ಉದಾರದೃಷ್ಟಿಯ ವೈದಿಕ ಧರ್ಮೋಪದೇಶಕರನ್ನು ಸಜ್ಜುಗೊಳಿಸುವುದೇ ವಿದ್ಯಾಲಯದ ಹೆಗ್ಗುರಿಯು.

ಕಾವ್ಯ/ನಾಟಕದ ಮಟ್ಟದ ಸಂಸ್ಕೃತ ಪರಿಚಯವನ್ನು ಬಲ್ಲವರಾಗಲಿ, ಕಾಲೇಜು ಮಟ್ಟದ ಇಂಗ್ಲೀಷ್ ಪರಿಚಯವನ್ನು ಬಲ್ಲವರಾಗಲಿ ವಿದ್ಯಾಲಯಕ್ಕೆ ಸೇರಬಹುದು. ಇಂಗ್ಲೀಷ್ ಪರಿಚಯವಿಲ್ಲದ ಸಂಸ್ಕೃತ ವಿದ್ಯಾರ್ಥಿಗಳಿಗೂ, ಸಂಸ್ಕೃತ ಪರಿಚಯವಿಲ್ಲದ ಇಂಗ್ಲೀಷ್/ಕನ್ನಡ/ತೆಲುಗು ವಿದ್ಯಾರ್ಥಿಗಳಿಗೂ ಆಯಾ ಭಾಷೆಗಳನ್ನು ಕಲಿಸಿಕೊಡಲಾಗುವುದು.

ವಾಚಾಲತೆ, ಸಂಸ್ಕೃತಜ್ಞಾನ, ಗ್ರಹಣಶಕ್ತಿ-ಇವುಗಳು ಹೆಚ್ಚಾಗಿರುವವರನ್ನು ಮೊದಲು ಆರಿಸಿಕೊಳ್ಳಲಾಗುವುದು. ಒಂದೆರಡು ತಿಂಗಳು ಪರೀಕ್ಷೆಯನ್ನು ಮಾಡಿದ ಮೇಲೆಯೇ ನಿಯತವಿದ್ಯಾರ್ಥಿಗಳ ಗುಂಪಿಗೆ ಸೇರಿಸಿಕೊಳ್ಳಲಾಗುತ್ತದೆ.

ಸಾಮಾನ್ಯವಾಗಿ ಪಾಠಗಳು ಸಂಸ್ಕೃತ/ಇಂಗ್ಲೀಷ್ ಮಾಧ್ಯಮದಲ್ಲಿಯೇ ಇರುತ್ತವೆ. ಅರ್ಹತೆ ಇರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ ಮತ್ತು ವಸತಿಗಳ ಏರ್ಪಾಡು ಮಾಡಲಾಗುವುದು.

ಹತ್ತರಿಂದ ಹದಿನಾರು ವರ್ಷ ವಯೋಮಿತಿ ಇರುವ ಕಿರಿಯ ವಿದ್ಯಾರ್ಥಿಗಳಿಗೆ ಸಂಸ್ಕೃತಭಾಷಾಭ್ಯಾಸ, ಸೂಕ್ತ ವೇದಾಧ್ಯಯನ, ಪೂಜಾವಿಧಾನ ಇತ್ಯಾದಿಗಳನ್ನು ಹೇಳಿಕೊಡುವ ಏರ್ಪಾಡನ್ನೂ ಮಾಡಲಾಗಿದೆ. ಈ ಅಭ್ಯಾಸಕ್ರಮಕ್ಕೆ ಮೂರು ವರ್ಷಗಳ ಕಾಲ ನಿಗದಿ ಪಡಿಸಲಾಗಿದೆ. ಈ ಏರ್ಪಾಡು ಐದು ವಿದ್ಯಾರ್ಥಿಗಳಿಗೆ ಸೀಮಿತ.

ಮೇಲೆ ವಿವರಿಸಿರುವಂತೆ ಅರ್ಹತೆಯುಳ್ಳವರು ಏಪ್ರಿಲ್ ೧೫ನೇ ದಿನಾಂಕದ ಒಳಗೆ ಅಧಿಕೃತ ಪ್ರವೇಶಪತ್ರ, ಅಭ್ಯಾಸಕ್ರಮ ಇತ್ಯಾದಿಗಳನ್ನು ಈ ಕೆಳಕಂಡ ವಿಳಾಸದಿಂದ ಪಡೆದು ಪ್ರವೇಶಪತ್ರವನ್ನು ಸಲ್ಲಿಸಬೇಕು. ಪಾಠಗಳು ಮೇ ೧ನೇ ದಿನಾಂಕದಿಂದ ಪ್ರಾರಂಭವಾಗಲಿದೆ.

ಹೆಚ್ಚಿನ ವಿವರಗಳಿಗೆ ಕೆಳಗೆ ಕೊಟ್ಟ ವಿಳಾಸ/ದೂರವಾಣಿಯ ಮೂಲಕ ಸಂಪರ್ಕಿಸಬಹುದು.

ಅಧ್ಯಕ್ಷರು, ಅಧ್ಯಾತ್ಮಪ್ರಕಾಶಕಾರ್ಯಾಲಯ
secretary@adhyatmaprakasha.org
coordinator-apk@yahoo.com
www.adhyatmaprakasha.org
(ಸಾರ್ವಜನಿಕ ಧರ್ಮಾರ್ಥ ಸಂಸ್ಥೆ)
ಹೊಳೆನರಸೀಪುರ, ಹಾಸನ ಜಿಲ್ಲೆ- 573 211
ದೂ: 08175-273820